ನೂಬಾರ್ ಪಾಷಾ
	1825-1899. ಈಜಿಪ್ಟಿನ ರಾಜಕಾರಣಿ; 1878-79, 1884-88 ಮತ್ತು 1894-95ರಲ್ಲಿ ಪ್ರಧಾನಿಯಾಗಿದ್ದವ. ತುರ್ಕಿಯಲ್ಲಿ ಸ್ಮಿರ್ನದಲ್ಲಿ ಆರ್ಮೇನಿಯನ್ ಕುಟುಂಬವೊಂದರಲ್ಲಿ ಜನಿಸಿದ (ಜನವರಿ 1825). ಜಿನೀವ ಮತ್ತು ಸೊರೇಜ್‍ಗಳಲ್ಲಿ ಶಿಕ್ಷಣ ಪಡೆದು, ಈಜಿಪ್ಟಿಗೆ ಹೋಗಿ, ಮೊಹಮೌದ್ ಅಲಿ ಪಾಷಾನ ವಾಣಿಜ್ಯ ಮತ್ತು ವಿದೇಶ ವ್ಯವಾಹರಗಳ ನಿರ್ದೇಶಕನಾಗಿದ್ದ ಬೋಗೋಸ್ ಬೇ ಯೂಸುಫಿಯಾನನಿಗೆ ಕಾರ್ಯದರ್ಶಿಯಾದ (1842). 1844ರಲ್ಲಿ ಬೇ ಕಾಲವಾದ ಮೇಲೆ ಮೊಹತಾದ್ ಅಲಿಯ ಕಾರ್ಯದರ್ಶಿ-ಭಾಷಾಂತರಕಾರನಾಗಿದ್ದ. ಅನಂತರ ಇಬ್ರಾಹಿಂ ಪಾಷಾನ ಬಳಿ ಸೇರಿ 1846 ಮತ್ತು 1847ರಲ್ಲಿ ಅವನೊಂದಿಗೆ ಪ್ಯಾರಿಸ್ ಪ್ರಯಾಣ ಮಾಡಿದ. ವೈಸ್‍ರಾಯ್‍ನ ಒಂದನೇ ಅಬ್ಬಾಸ್ 1848ರಲ್ಲಿ ಇವನನ್ನು ಪ್ರಥಮ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡ. 1853ರಲ್ಲಿ ವೈಸರಾಯನ ಯೂರೋಪಿನ ಕಾರ್ಯದರ್ಶಿಯಾಗಿ ಇವನ ನೇಮಕವಾಯಿತು. ಸಯೀದ್ ಪಾಷಾ ವೈಸರಾಯ್ ಆದಾಗ ನೂಬಾರ್ ಪಾಷಾ ಈಜಿಪ್ಟಿಗೆ ಮರಳಿ ಅವನೊಂದಿಗೆ 1856-57ರಲ್ಲಿ ಸೂಡಾನಿನ ಪ್ರವಾಸ ಮಾಡಿದ. ಸಯೀದ್ ಪಾಷಾನ ಕೆಳಗೆ ಸಾರಿಗೆ ಅಧಿಕಾರವನ್ನು ವಹಿಸಿಕೊಂಡು ಕೈರೋದಿಂದ ಸೂಯೆಜ್‍ವರೆಗೆ ರೈಲು ಮಾರ್ಗ ನಿರ್ಮಿಸಿದ. ಸಯೀದ್ ಪಾಷಾ ಮತ್ತು ಫರ್ಡಿನೆಂಡ್ ಡ ಲೆಸೆಪ್ಸ್ ಇವರ ನಡುವಿನ, ಸೂಯೆಜ್ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದ, ವ್ಯವಹಾರಗಳಲ್ಲಿ ಇವನದು ಪ್ರಮುಖ ಪಾತ್ರವಾಗಿತ್ತು. ಇಸ್ಮೇಲ್ ಪಾಷಾನ ಆಡಳಿತ ಕಾಲದಲ್ಲಿ (1863-1879) ನೂಬಾರ್ ಬೇಗ ಮೇಲಕ್ಕೆ ಬಂದ. 1863-64ರಲ್ಲಿ ಫ್ರೆಂಚ್ ಸರ್ಕಾರ ಮತ್ತು ಸೂಯೆಜ್ ಕಾಲುವೆ ಕಂಪೆನಿಗಳ ನಡುವೆ ಕಾಲುವೆ ನಿರ್ಮಾಣದ ಗುತ್ತಿಗೆಯ ಮೂಲ ಕರಾರುಗಳನ್ನು ಪರಿಷ್ಕರಿಸುವ ಸಂಬಂಧದಲ್ಲಿ ನೂಬಾರ್ ಯಶಸ್ವಿಯಾಗಿ ಸಂಧಾನ ನಡೆಸಿದ. 1865ರಲ್ಲಿ ಇವನು ಲೋಕೋಪಯೋಗಿ ಮಂತ್ರಿಯೂ. 1866ರಲ್ಲಿ ವಿದೇಶ ವ್ಯವಹಾರಗಳ ಮಂತ್ರಿಯೂ ಆದ. 1878ರಲ್ಲಿ ಇಸ್ಮೇಲ್ ಪಾಷಾ ನೂಬಾರನನ್ನು ಪ್ರಧಾನಿಯಾಗಿ ನೇಮಿಸಿದ. ಇವನ ಸರ್ಕಾರ ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ಕೈಗೊಂಡಿತು. ಇಸ್ಮೇಲ್ ಇವನನ್ನು ಪದವಿಯಿಂದ ತೆಗೆದು ಹಾಕಿದ. (1879) ಇಸ್ಮೇಲನ ಅನಂತರ ಅಧಿಕಾರಕ್ಕೆ ಬಂದ ಟೌಫಿಕ್ ಪಾಷಾ ಈತನನ್ನು 1884ರಲ್ಲಿ ಮತ್ತೆ ಪ್ರಧಾನಿಯನ್ನಾಗಿ ಮಾಡಿದ. ನೂಬಾರ್ ನ್ಯಾಯ ಮತ್ತು ಒಳನಾಡಿನ ಇಲಾಖೆಯಲ್ಲಿ ಈಜಿಪ್ಟಿನ ಹಿಡಿತವನ್ನು ದೃಢಪಡಿಸುವುದರಲ್ಲಿ ಯಶಸ್ವಿಯಾದ. ಇದರಿಂದ ಈಜಿಪ್ಟಿನಲ್ಲಿ ಬ್ರಿಟೀಷ್ ಮತ್ತು ಈಜಿಪ್ಟಿನವರ ಅಧಿಕಾರ ಸೀಮೆಯನ್ನು ಬೇರ್ಪಡಿಸುವುದು ಸುಲಭವಾಯಿತು. ನೂಬಾರನ ಜಾಣ್ಮೆಯ ಆಡಳಿತದಿಂದಾಗಿ ಬ್ರಿಟೀಷರ ಅಧಿಕಾರ ಶಾಂತಿಯುತವಾಗಿ ಮುಂದುವರಿಯಿತು. ಆದರೆ, ಈತ ಸ್ವತಂತ್ರ ಧೋರಣೆಯನ್ನು ಅನುಸರಿಸುತ್ತಿದ್ದುದು ಬ್ರಿಟೀಷರಿಗೆ ಹಿಡಿಸಲಿಲ್ಲ. ಪ್ರಾಂತೀಯ ಪೋಲೀಸ್ ಇಲಾಖೆಯ ಮೇಲೆ ಈತ ತನ್ನ ಅಧಿಕಾರವನ್ನು ದೃಢಪಡಿಸಲು ಯತ್ನಿಸಿದಾಗ 1888ರಲ್ಲಿ ಬ್ರಿಟನ್ ಇವನನ್ನು ಉಚ್ಛಾಟಿಸಿತು. 1894ರಲ್ಲಿ ನೂಬಾರ್ ಮತ್ತೆ ಪ್ರಧಾನಿಯಾದರೂ ಅನಾರೋಗ್ಯದಿಂದಲೂ, ಬ್ರಿಟಿಷ್ ಅಧಿಕಾರದ ಬಗ್ಗೆ ಅಸಹನೆಯಿಂದಲೂ ಇವನು ಮರುವರ್ಷ ರಾಜೀನಾಮೆ ನೀಡಿದ. 1899ರ ಜನವರಿ 14ರಂದು ಇವನು ಪ್ಯಾರಿಸಿನಲ್ಲಿ ತೀರಿಕೊಂಡ.

	ನೂಬಾರ್ ಸಮಯೋಚಿತವಾಗಿ ತನ್ನ ಮನಸ್ಸು ನಡೆತೆಗಳನ್ನು ಬದಲಾಯಿಸಬಲ್ಲವನೂ ನಮ್ರ ಸ್ವಭಾವದವನೂ ಆಗಿದ್ದ. ಆಡಳಿತಕ್ಕಿಂತ ಅಂತರರಾಷ್ಟ್ರೀಯ ಸಂಧಾನ ನಿರ್ವಹಣೆಯಲ್ಲಿ ಇವನು ಹೆಚ್ಚು ಸಮರ್ಥನಾಗಿದ್ದ. ಇವನಿಗೂ ಈಜಿಪ್ಟಿನ ಜನತೆಗೂ ನಡುವೆ ಹೆಚ್ಚಿನ ಸಾಮ್ಯವಿರಲಿಲ್ಲ. ಈಜಿಪ್ಟಿನಲ್ಲಿ ಇವನನ್ನು ವಿದೇಶೀಯ ಎಂದು ಪರಿಗಣಿಸಲಾಗುತ್ತಿತ್ತು.		   (ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ